ನೆಮನ್
	ಸೋವಿಯೆತ್ ಒಕ್ಕೂಟದ ಒಂದು ನದಿ. 937 ಕಿಮೀ. ಉದ್ದ ಇರುವ ಈ ನದಿಯ ಜಲೋತ್ಸಾರಣ ಪ್ರದೇಶದ ವಿಸ್ತೀರ್ಣ 98,000 ಚ.ಕಿಮೀ. ಇದು ಬೆಲೋರಷ್ಯನ್ ಸೋವಿಯತ್ ಗಣರಾಜ್ಯದ ಮಿನ್ಸ್ಕ್ ಪ್ರದೇಶದಲ್ಲಿ ಮಿನ್ಸ್ಕ್ ನಗರದ ಬಳಿ ಉಗಮಿಸಿ ಪಶ್ಚಿಮಾಭಿಮುಖವಾಗಿ ವಿಶಾಲವಾದ ಜವುಗು ಪ್ರದೇಶದ ಮೂಲಕ ಹರಿದು, ಉತ್ತರಕ್ಕೆ ತಿರುಗಿ ಲಿತುವೇನಿಯವನ್ನು ಪ್ರವೇಶಿಸಿ ಅಲ್ಲಿ ಅಂಕುಡೊಂಕಾದ ಇಕ್ಕಟ್ಟಾದ ಕಣಿವೆಯಲ್ಲಿ ಪ್ರವಹಿಸುತ್ತದೆ. ಕೌನಾಸ್ ನಗರದ ಬಳಿ ಇದು ಮತ್ತೆ ಪಶ್ಚಿಮಕ್ಕೆ ತಿರುಗಿ ಇನ್ನೊಂದು ಜವುಗು ಪ್ರದೇಶವನ್ನು ಹಾದು ಕುರಿಸ್ಛಸ್‍ಹಾಫ್ ಖಾರಿಯಲ್ಲಿ ಬಾಲ್ಟಿಕ್ ಸಮುದ್ರವನ್ನು ಸೇರುತ್ತದೆ. ಈ ನದಿಯ ಕೊನೆಯ ಭಾಗಕ್ಕೆ ಮೆಮೆಲ್ ಎಂಬ ಜರ್ಮನ್ ಹೆಸರು ಇದೆ. ಕೌನಾಸ್ ಬಳಿ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಈ ನದಿಯಲ್ಲಿ ಬೆಲಿಟ್ಸಾ ವರೆಗೆ 665 ಕಿಮೀ. ದೂರ ನೌಕಾಯಾನ ಸಾಧ್ಯ. ಮರದ ದಿಮ್ಮಿಗಳನ್ನು ತೇಲಿಸಲು ನದಿ ಉಪಯುಕ್ತವಾಗಿದೆ. ನವೆಂಬರ್ ಕೊನೆಯಿಂದ ಹಿಡಿದು ಮಾರ್ಚ್ ಮಧ್ಯದವರೆಗೆ ನದಿಯ ನೀರು ಹೆಪ್ಪುಗಟ್ಟಿರುತ್ತದೆ.

	1914ರ ಸೆಪ್ಟೆಂಬರಿನಲ್ಲಿ ಗ್ರಾಡ್ನ ಹಾಗೂ ಕೌನಾಸ್ ನಗರಗಳ ನಡುವಣ ನೆಮನ್ ನದಿತೀರ ಪ್ರದೇಶದಲ್ಲಿ ನಡೆದ ಕದನದಲ್ಲಿ ರಷ್ಯನರು ಹಿಂಡನ್‍ಬರ್ಗ್‍ನ ನೇತೃತ್ವದಲ್ಲಿದ್ದ ಜರ್ಮನ್ ಸೇನೆಯನ್ನು ಸೋಲಿಸಿದರು.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ